ಬೆನೆಟ್ಟೈಟೇಲೀಸ್
 ಅನಾವೃತ ಬೀಜ ಸಸ್ಯಗಳ (ಜಿಮ್ನೊಸ್ಪರ್ಮ್) ಗುಂಪಿಗೆ ಸೇರಿದ ಗತವಂಶಿ ಸಸ್ಯಗಳನ್ನು ಒಳಗೊಂಡ ವರ್ಗ.  ಸೈಕ್ಯಾಡಿಯಾಯ್ಡೇಲೀಸ್ ಪರ್ಯಾಯ ನಾಮ.  ಈ ವರ್ಗದ ಸಸ್ಯಗಳು ಸುಮಾರು 180 ಮಿಲಿಯನ್ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ಬದುಕಿದ್ದವೆಂದು ಅಂದಾಜು ಮಾಡಲಾಗಿದೆ. ಮೀಸೋeóÉೂೀಯಿಕ್ ಯುಗದ ಟ್ರಯಾಸಿಕ್ ಕಾಲದಲ್ಲಿದ್ದ ಇವು 80 ಮಿಲಿಯನ್ ವರ್ಷ ಬಾಳಿ ಬದುಕಿ, ಸರಿಸುಮಾರು ಕ್ರಿಟೇಷಸ್ ಕಾಲದಲ್ಲಿ ಅಂತ್ಯಗೊಂಡವೆಂದು ಹೇಳಲಾಗಿದೆ.  ಈಗ ಬರಿಯ ಪಳೆಯುಳಿಕೆಗಳ ರೂಪದಲ್ಲಿ ಮಾತ್ರ ಲಭ್ಯವಾಗಿವೆ.  

	ಬೆನೆಟ್ಟೈಟೇಲೀಸ್ ಸಸ್ಯಗಳು ಭೂಮಿಯ ಎಲ್ಲ ಖಂಡಗಳಲ್ಲೂ ಹರಡಿದ್ದುವು.  ಈ ವರ್ಗಕ್ಕೆ ಸೇರಿದ ಸಸ್ಯಗಳು ಮುಖ್ಯವಾಗಿ ನಾಲ್ಕು: ಸೈಕೆಡಿಯಾಯ್ಡಿಯ (ಬೆನೆಟ್ಟೈಟಿಸ್), ವಿಲಿಯಮ್‍ಸೋನಿಯ, ವಿಲಿಯಮ್‍ಸೋನಿಯೆಲ್ಲ ಮತ್ತು ವೈಲ್ಯಾಂಡಿಯೆಲ್ಲ.  

	ಆಧುನಿಕ ತಾಳಕಲ್ಪಗಳಿಗಿಂತ ಬೆನೆಟ್ಟೈಟೇಲೀಸ್ ಸಸ್ಯಗಳು ಹೆಚ್ಚು ವೈವಿಧ್ಯಮಯವಾಗಿದ್ದುವು.  ಹೆಚ್ಚುಕಡಿಮೆ ಎಲ್ಲ ಸಸ್ಯಗಳೂ ಎತ್ತರದಲ್ಲಿ 1 ರಿಂದ 2 ಮೀಟರ್ ಇದ್ದುವು.  ಸೈಕೆಡಿಯಾಯ್ಡಿಯದ ಕಾಂಡ ಉದ್ದವಾಗಿರಲಿಲ್ಲ.  ಇದು ಬಹುಮಟ್ಟಿಗೆ ರೆಂಬೆರಹಿತವಾಗಿತ್ತು.  ವಿಲಿಯಮ್‍ಸೋನಿಯದ ಕಾಂಡ ಉದ್ದವಾಗಿದ್ದು ಸ್ತಂಭಾಕೃತಿಯಲ್ಲಿತ್ತು.  ಇದಕ್ಕೆ ಒಂದೆರಡು ರೆಂಬೆಗಳಿದ್ದುವು.  ಎಲ್ಲವುಗಳಲ್ಲೂ ಕಾಂಡದ ಅಗ್ರಭಾಗದಲ್ಲಿ ಉದ್ದನೆಯ ಚಾಮರದಂಥ (ಜರೀ ಗಿಡಗಳಿರುವಂಥ) ಎಲೆಗಳಿದ್ದುವು.  ಕಾಂಡಗಳನ್ನು ಒರಟಾದ ಎಲೆಯ ಬುಡಗಳು ಆವರಿಸಿದ್ದುವು.  ಜೊತೆಗೆ ತುಪ್ಪುಳದಂಥ ರಮೆಂಟ ಎಂಬ ಹುರುಪೆಗಳು ಕಾಂಡವನ್ನು ಸುತ್ತುವರಿದಿದ್ದುವು.  

	ವಿಲಿಯಮ್‍ಸೋನಿಯೆಲ್ಲ ಹಾಗೂ ವೈಲಾಂಡಿಯೆಲ್ಲದ ಕಾಂಡಗಳು ನುಣುಪು ಮತ್ತು ಸಪುರವಾಗಿದ್ದುವು.  ಕಾಂಡಗಳಿಗೆ ರೆಂಬೆಗಳಿದ್ದು, ಅವು ಮೂಡುವೆಡೆಯಲ್ಲಿ ಎಲೆಗಳ ಗೊಂಚಲುಗಳಿದ್ದುವು. 

	ಸೈಕೆಡಿಯಾಯ್ಡಿಯದ ಸಂತಾನೋತ್ಪತ್ತಿಯ ಅಂಗಗಳು ಒಗ್ಗೂಡಿ ಸ್ಟ್ರೊಬೈಲಸ್ ಎಂಬ ರಚನೆಗಳಾಗಿದ್ದುವು.  ಎಲೆಗಳ ಬುಡಗಳ ನಡುವೆ ಮೂಡುತ್ತಿದ್ದ ಇವಕ್ಕೆ ಸಣ್ಣ ತೊಟ್ಟುಗಳಿದ್ದುವು.  ವಿಲಿಯಮ್‍ಸೋನಿಯದ ಸ್ಟ್ರೊಬೈಲಸಿಗೆ ಉದ್ದ ತೊಟ್ಟುಗಳಿದ್ದು ಅದು ಕಾಂಡದ ತುದಿಯಲ್ಲಿದ್ದ ಎಲೆಗಳ ನಡುವೆ ಸ್ಥಿತವಾಗಿತ್ತು.  ಮಿಕ್ಕೆರಡು ಸಸ್ಯಗಳಲ್ಲಿ ಕಾಂಡದ ತುದಿಯಲ್ಲಿ ನೇರವಾಗಿ ಬೆಳೆದಿದ್ದ ಒಂದೇ ಒಂದು ಸ್ಟ್ರೊಬೈಲಸ್ ಇತ್ತು.  

	ಪ್ರತಿ ಸ್ಟ್ರೊಬೈಲಸಿನಲ್ಲೂ ಎರಡು ವಿಧದ ಸ್ಪೊರಾಂಜಿಯಗಳಿದ್ದುವು.  ಇವೆಂದರೆ ಮೈಕ್ರೊಸ್ಪೊರಾಂಜಿಯ (ಗಂಡು) ಮತ್ತು ಮೆಗಸ್ಪೂರಾಂಜಿಯ (ಹೆಣ್ಣು).  ಮೈಕ್ರೊಸ್ಪೊರಾಂಜಿಗಳು ಮೈಕ್ರೊಸ್ಪೋರೋಫಿಲ್ ಎಂಬ ಪತ್ರಗಳ (ಕೇಸರ) ಮೇಲೂ, ಮೆಗಸ್ಪೊರಾಂಜಿಯಗಳು ಮೆಗಸ್ಪೋರೋಫಿಲ್ ಎಂಬ ಪತ್ರಗಳ (ಕಾರ್ಪೆಲ್) ಮೇಲೂ ಉದ್ಭವಿಸುತ್ತಿದ್ದುವು.  

	ಸೈಕೆಡಿಯಾಯ್ಡಿಯದ ಮೈಕ್ರೊಸ್ಪೋರೋಫಿಲುಗಳು ಉದ್ದಕ್ಕಿದ್ದು ಸಂಯುಕ್ತ ಪರ್ಣದ ರೂಪದಲ್ಲಿದ್ದುವು.  ಪ್ರತಿ ಸ್ಟ್ರೊಬೈಲಸಿನಲ್ಲೂ 10-20 ಸಂಖ್ಯೆಯಲ್ಲಿದ್ದ ಇವುಗಳಲ್ಲಿ ಅಸಂಖ್ಯಾತ ಮೈಕ್ರೊಸ್ಪೊರಾಂಜಿಯಗಳಿದ್ದುವು.  ಸ್ಟ್ರೋಬೈಲಸಿನ ಕೇಂದ್ರಭಾಗದಲ್ಲಿ ಮೆಗಸ್ಪೋರೋಫಿಲ್‍ಗಳಿದ್ದುವು.  ಪ್ರತಿ ಮೆಗಸ್ಪೊರೋಫಿಲಿನಲ್ಲಿ ಒಂದೇ ಅಂಡಕವಿತ್ತು (ಓವ್ಯೂಲ್).  ಪ್ರತಿ ಅಂಡಕವೂ ಮೂರು ಪದರಗಳ ಹೊದಿಕೆಯಿಂದ ಆವೃತವಾಗಿತ್ತು. 
 
	ಬೆನೆಟ್ಟೈಟೇಲೀಸ್ ಸಸ್ಯ ಲಿಂಗಾಣುಜನಕಗಳ ಬಗೆಗೆ ಏನೂ ಗೊತ್ತಿಲ್ಲ.  ಏಕೆಂದರೆ ಇವು ತೀರ ಮೃದುವಾಗಿದ್ದುದರಿಂದ ಪಳೆಯುಳಿಕೆಗಳಾಗಲಿಲ್ಲ.  

	ಬೆನೆಟ್ಟೈಟೇಲೀಸ್ ವರ್ಗದ ಅಭ್ಯಾಸದಲ್ಲಿನ ಅತ್ಯಂತ ಪ್ರಮುಖ ಅಂಶವೆಂದರೆ ಆವೃತ ಬೀಜ ಸಸ್ಯಗಳ (ಹೂ ಬಿಡುವ ಸಸ್ಯಗಳು) ಉಗಮದಲ್ಲಿ ಇವು ವಹಿಸಿರಬಹುದಾದ ಪಾತ್ರ,  ಬೆನೆಟ್ಟೈಟೇಲಿಸುಗಳ ಸ್ಟ್ರೊಬೈಲಸಿಗೂ ಹೂ ಬಿಡುವ ಸಸ್ಯವಾದ ಮ್ಯಾಗ್ನೋಲಿಯದ ಹೂವಿಗೂ ಇರುವ ಅನೇಕ ಹೋಲಿಕೆಗಳು ಅವೆರಡರ ನಡುವೆ ಇದ್ದಿರಬಹುದಾದ ಸಂಬಂಧವನ್ನು ತೋರಿಸುತ್ತದೆ.  ಆದರೆ ಬೆನೆಟ್ಟೈಟೇಲೀಸ್ ವರ್ಗಕ್ಕೂ ಮ್ಯಾಗ್ನೋಲಿಯ ಸಸ್ಯಗಳಿಗೂ ಹೋಲಿಕೆ ಅತ್ಯಂತ ನಿಕಟವಾದುದಲ್ಲ ಎಂಬ ಅಭಿಪ್ರಾಯವೂ ಇದೆ.  ಆದ್ದರಿಂದ ಆವೃತಬೀಜ ಸಸ್ಯಗಳ ಉಗಮದಲ್ಲಿ ಬೆನೆಟ್ಟೈಟೇಲೀಸ್ ಗುಂಪಿನವು ಯಾವ ಪಾತ್ರವನ್ನೂ ವಹಿಸಿರಲಾರವೆನ್ನಲಾಗಿದೆ.			
(ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ